Monday, March 25, 2024

ವ್ಯಾಸ ವೀಕ್ಷಿತ - 78 ಕರ್ಣನ ಯುದ್ಧೋಪದೇಶ (Vyaasa Vikshita - 78 Karnana Yuddhopadesha)

 ಲೇಖಕರು : ಪ್ರೊ. ಕೆ. ಎಸ್. ಕಣ್ಣನ್

ಪ್ರತಿಕ್ರಿಯಿಸಿರಿ (lekhana@ayvm.in)




ಕೃಷ್ಣೆಯನ್ನು ಅವರಿಂದ ಬೇರ್ಪಡಿಸುದೆನ್ನುವುದೂ ಸಹ ಯಾರಿಂದಲೂ ಆಗದ ಮಾತು. ಅವರು ಹೀನದೀನರಾಗಿರುವಾಗಲೇ ಅವರನ್ನು ದ್ರೌಪದಿಯು ವರಿಸಿರುವಳು; ಹಾಗಿರಲು, ಈಗಂತೂ ಸೊಗಯಿಸುತ್ತಿರುವ ಅವರ ಬಗ್ಗೆ ಹೇಳುವುದೇನಿದೆ? ಒಬ್ಬಳಿಗೇ ಹಲವು ಪತಿಯರೆಂಬುದು ಸ್ತ್ರೀಯರು ಬಯಸುವ ಗುಣವೇ ಆಗಿರಬಹುದು. ಅದನ್ನು ಕೃಷ್ಣೆಯು ಪಡೆದೇ ಇದ್ದಾಳೆ; ಹೀಗಿರುವವಳಲ್ಲಿ ಭೇದವನ್ನುಂಟುಮಾಡಿಬಿಡುವುದು - ಎನ್ನುವುದು ಸಾಧ್ಯವಾಗುವ ಮಾತಲ್ಲ.

ಇನ್ನು ದ್ರುಪದನ ವಿಷಯವನ್ನು ಹೇಳುವುದಾದರೆ, ಅತನು ಆರ್ಯವ್ರತ: ಶ್ರೇಷ್ಠವಾದ ವ್ರತವನ್ನು ಪಾಲಿಸತಕ್ಕವನು. ಅತನೇನೂ ಧನಲೋಭಿಯಲ್ಲ. ರಾಜ್ಯದಾನವನ್ನೇ ಮಾಡಿದರೂ ಸಹ, ಅತನು ಪಾಂಡವರನ್ನು ಬಿಟ್ಟುಕೊಡುವವನೇನಲ್ಲ. ಆತನ ಪುತ್ರ(ಧೃಷ್ಟದ್ಯುಮ್ನ)ನೂ ಅಷ್ಟೆ: ಗುಣಶಾಲಿ, ಹಾಗೂ ಪಾಂಡವರಲ್ಲಿ ಪ್ರೀತಿಯುಳ್ಳವನು.

ಹೀಗಾಗಿ ನೀ ಹೇಳಿದ ಉಪಾಯಗಳಿಂದ ಪಾಂಡವರನ್ನು ವಶಪಡಿಸಿಕೊಳ್ಳುವುದೆನ್ನುವುದು ಯಾವ ರೀತಿಯೂ ಸಾಧ್ಯವಾಗತಕ್ಕದ್ದಲ್ಲ.

ನರಶ್ರೇಷ್ಠನೇ, ನಮಗೆ ಮಾಡಲಾಗುವಂತಹುದೆಂದರೆ ಇದೋ ಇದು: ಪಾಂಡವರು ಇನ್ನೂ ಬೇರೂರಿಲ್ಲವೆಂದಿರುವಾಗಲೇ ಅವರನ್ನು ಪ್ರಹರಿಸತಕ್ಕದ್ದು. ಅದು ನಿನಗೆ ಇಷ್ಟವಾಗುವುದಾದರೆ ಚೆನ್ನು.

ಎಲ್ಲಿಯವರೆಗೆ ನಮ್ಮ ಪಕ್ಷವು ಮಹತ್ತಾಗಿರುವುದೋ ಎಲ್ಲಿಯವರೆಗೆ ದ್ರುಪದನಿನ್ನೂ ಲಘುವಾಗಿಯೇ ಇರುವನೋ ಅಷ್ಟರಲ್ಲೇ ಅವರ ಮೇಲೇರಿಹೋಗುವುದನ್ನು ಮಾಡುವುದಾಗಲಿ, ಬೇರೆ ವಿಚಾರ ಬೇಡ. ಎಲ್ಲಿಯ ತನಕ ಪಾಂಡವರಲ್ಲಿ ಹೇರಳವಾದ ವಾಹನಗಳು, ಮಿತ್ರರು, ಕುಲಗಳು - ಇವೆಲ್ಲ ಸೇರಿಕೊಳ್ಳವೋ, ಅಷ್ಟರಲ್ಲೇ ಓ ಗಾಂಧಾರೀಪುತ್ರನೇ, ಅವರ ಮೇಲೆ ನಿನ್ನ ಪರಾಕ್ರಮವನ್ನು ತೋರು! ಎಲ್ಲಿಯವರೆಗೆ ರಾಜಾ ದ್ರುಪದನು ತನ್ನ ಮಹಾಪರಾಕ್ರಮಶಾಲಿಗಳಾದ ಮಕ್ಕಳ ಸಮೇತನಾಗಿ ನಮ್ಮ ಮೇಲೇರಿಬರುವ ಸಂಕಲ್ಪವನ್ನು ಮಾಡನೋ ಅಷ್ಟರಲ್ಲೇ ಇದಾಗಲಿ! ಯಾದವಸೈನ್ಯವನ್ನು ತೆಗೆದುಕೊಂಡು ದ್ರುಪದನ ಅರಮನೆಯತ್ತ ಕೃಷ್ಣನು ಪಾಂಡವರಾಜ್ಯಾರ್ಥವಾಗಿ ಬಂದುಬಿಟ್ಟಾನು; ಅಷ್ಟರೊಳಗೇ ತೋರಿಸು ನಿನ್ನ ಪರಾಕ್ರಮವನ್ನು!

ಐಶ್ವರ್ಯವೇನು, ಬಗೆಬಗೆಯ ಭೋಗಗಳೇನು, ಇಡೀ ರಾಜ್ಯವೇನು - ಪಾಂಡವರಿಗೆ ಏನನ್ನೂ ಕೊಡಲೂ ಸಿದ್ಧನಿರುವನು, ಆ ಕೃಷ್ಣನು! ಇಂತಹುದನ್ನು ಕೊಡಬಾರದೆಂಬುದೇ ಇಲ್ಲ, ಆತನಿಗೆ! ಮಹಾತ್ಮನಾದ ಭರತನು ಭೂಮಿಯನ್ನು ಪಡೆದುಕೊಂಡದ್ದು ಹೇಗೆ? ವಿಕ್ರಮದಿಂದ! ಇಂದ್ರನು ಮೂರು ಲೋಕಗಳನ್ನೂ ಗೆದ್ದದ್ದು ಹೇಗೆ? ವಿಕ್ರಮದಿಂದಲೇ! ರಾಜನೇ, ಕ್ಷತ್ರಿಯನನ್ನು ಹೊಗಳುವುದು ಆತನ ಪರಾಕ್ರಮದ ಮೇರೆಗೇ. ಶೂರರ ಸ್ವಧರ್ಮವೆಂದರೆ ಪರಾಕ್ರಮವೇ ಸರಿ! ಮಹತ್ತಾದ ಚತುರಂಗಸಮೇತವಾದ ಸೈನ್ಯದೊಂದಿಗೆ ದ್ರುಪದನನ್ನು ಮಥನಮಾಡಿ ಪಾಂಡವರನ್ನಿಲ್ಲಿಗೆ ಸೆರೆಹಿಡಿದು ತರೋಣ! ಸಾಮದಿಂದಾಗಲಿ, ದಾನದಿಂದಾಗಲಿ, ಭೇದದಿಂದಾಗಲಿ ಪಾಂಡವರನ್ನು ವಶಕ್ಕೆ ತೆಗೆದುಕೊಳ್ಳಲಾಗದು! ಎಂದೇ ಪರಾಕ್ರಮದಿಂದಲೇ ಅವರನ್ನು ಪರಾಕ್ರಮದಿಂದಲೇ ಗೆದ್ದು ಇಡೀ ಭೂಮಿಯನ್ನು ಭೋಗಿಸು. ಇದಕ್ಕೆ ಭಿನ್ನವಾಗಿರುವ ಅದೆಂತಹುದೇ ಕಾರ್ಯಕ್ರಮವನ್ನು ನಾ ಕಾಣೆ - ಎಂದನು.

ರಾಧೇಯ(ಕರ್ಣ)ನ ಮಾತುಗಳನ್ನು ಕೇಳಿದ ಧೃತರಾಷ್ಟ್ರನು "ಕರ್ಣ, ನೀನು ಮಹಾಪ್ರಾಜ್ಞ ಮತ್ತು ಕೃತಾಸ್ತ್ರ (ಅಸ್ತ್ರವಿದ್ಯೆಯನ್ನು ಬಲ್ಲವನು). ಸೂತವಂಶಕ್ಕೇ ಆನಂದವುಂಟುಮಾಡುವವನು. ಪರಾಕ್ರಮಯುಕ್ತವಾದ ಈ ಮಾತು ನಿನಗೆ ಶೋಭಿಸುತ್ತದೆ. ನೀವಿಬ್ಬರೂ ಭೀಷ್ಮ-ದ್ರೋಣ-ವಿದುರರೊಂದಿಗೆ ಕಲೆತು ಒಂದು ನಿಶ್ಚಯಕ್ಕೆ ಬನ್ನಿ. ಹೇಗೆ ಮಾಡಿದರೆ ಮುಂದೆ ನಮಗೆ ಸುಖವಾದೀತೋ ಹಾಗೆ ತೀರ್ಮಾನಿಸಿ. ಹಾಗೆ ಹೇಳಿದವನೇ, ಭೀಷ್ಮದ್ರೋಣರನ್ನೂ ಸರ್ವಮಂತ್ರಿಗಳನ್ನೂ ಬರಮಾಡಿಸಿ, ಅವರೊಂದಿಗೆ ಮಂತ್ರಾಲೋಚನೆ ಮಾಡಿದನು.

ಸೂಚನೆ : 3/3/2024 ರಂದು ಈ ಲೇಖನವು ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿದೆ.